ಕಾಬಟ್, ವಿಲಿಯಂ

 1763-1835. ಇಂಗ್ಲಿಷ್ ಲೇಖಕ, ಪತ್ರಿ ಕೋದ್ಯಮಿ, ತೀವ್ರಗಾಮಿ. 18ನೆಯ ಶತಮಾನದ ಕ್ರಾಂತಿ ಮತ್ತು ವಿಕ್ಟೋರಿಯನ್ ಯುಗದ ಆರಂಭ- ಇವುಗಳ ಮಧ್ಯಕಾಲದ ಸಾಮಾನ್ಯ ಜನರ ಜೀವನದ ಚಿತ್ರಣ ಈತನ ಬರೆಹಗಳಲ್ಲಿ ಮೂಡಿದೆ. ಕಾಬಟ್ ಹುಟ್ಟಿದ್ದು ಸರ್ರೆಯ ಫಾರ್‍ನಹ್ಯಾಂನಲ್ಲಿ, 1763ರ ಮಾರ್ಚ್ 9ರಂದು. ಈತನ ತಾತ ದಿನಗೂಲಿ ಕೆಲಸಗಾರ, ತಂದೆ ರೈತ. ಹದಿನಾಲ್ಕನೆಯ ವರ್ಷದ ವರೆಗೆ ತಂದೆಯ ಜೊತೆಯಲ್ಲಿ ಹೊಲದಲ್ಲಿ ಈತ ದುಡಿದ ಅನಂತರ ಸಾಹಸ ಜೀವನದಲ್ಲಿ ತೊಡಗಿದ. ಮನೆ ಬಿಟ್ಟು ಓಡಿಹೋಗಿ ಕ್ಯೂ ತೋಟಗಳಲ್ಲಿ ದುಡಿಮೆಗೆ ಸೇರಿದ. ಸ್ವಲ್ಪ ಸಮಯದ ಅನಂತರ ಮನೆಗೆ ಹಿಂದಿರುಗಿದ. 19ನೆಯ ವಯಸ್ಸಿನಲ್ಲಿ ಮತ್ತೆ ಮನೆಯಿಂದ ಹೊರಬಿದ್ದು ಲಂಡನಿನಲ್ಲಿ ಸಲಹಾವಕೀಲನೊಬ್ಬನ ಬಳಿ ಕೆಲಸಕ್ಕೆ ಸೇರಿದನಾದರೂ ಆ ಕೆಲಸ ಈತನಿಗೆ ಹಿಡಿಸಲಿಲ್ಲ. ಕೊನೆಗೆ ಅದನ್ನು ಬಿಟ್ಟು ಸೈನ್ಯಕ್ಕೆ ಸೇರಿದ. ತರಬೇತಿಯ ಕೇಂದ್ರದಲ್ಲಿ ಒಂದು ವರ್ಷ ಇದ್ದಾಗ ಓದುಬರೆಹಗಳಲ್ಲಿ ನಿರತನಾದ. ಅನಂತರ ಈತನನ್ನು ಯುದ್ಧರಂಗಕ್ಕೆ ಕಳುಹಿಸಲಾಯಿತು. 1791ರ ವರೆಗೆ ಇವನು ಸೈನ್ಯದಲ್ಲೇ ಇದ್ದು ರಜಿಮೆಂಟಲ್ ಸಾರ್ಜಂಟ್ ಮೇಜರ್ ಹುದ್ದೆಗೇರಿದ. ಸೈನ್ಯದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದ್ದ ಮೋಸ, ಹಣದ ದುರುಪಯೋಗ ಮುಂತಾದುವನ್ನು ಕಣ್ಣಾರ ಕಂಡ ಇವನು ಆ ಬಗ್ಗೆ ಮಾಹಿತಿ ಸಂಗ್ರಹಿಸಿ ಕೊಂಡಿದ್ದ. ಸರ್ಕಾರ 1791ರಲ್ಲಿ ಸೈನ್ಯವನ್ನು ಯುದ್ಧಕ್ಷೇತ್ರದಿಂದ ಹಿಂದಕ್ಕೆ ಕರೆಸಿ ಕೊಂಡ ಒಡನೆಯೇ ಇವನು ಸೈನ್ಯ ಸೇವೆಯಿಂದ ಬಿಡುಗಡೆ ಪಡೆದು, ಭ್ರಷ್ಟಾಚಾರಿ ಅಧಿಕಾರಿಗಳ ವಿಚಾರಣೆಯಾಗಬೇಕೆಂದು ಕೇಳಿದ. ಕಾಬಟನ ಬೇಡಿಕೆಯನ್ನು ಕೊನೆಗೂ ಮನ್ನಿಸಲಾಯಿತಾದರೂ ಈ ಆಪಾದನೆಯ ನ್ಯಾಯವಾದ ವಿಚಾರಣೆಯಾಗುವುದಿಲ್ಲವೆಂಬುದು ಇವನಿಗೆ ಮನವರಿಕೆಯಾದಾಗ ನಿರಾಶೆಗೊಂಡು. ವಿಚಾರಣೆಯ ಸಮಯದಲ್ಲಿ ಹಾಜರಾಗದೆ ಫ್ರಾನ್ಸಿಗೆ ಓಡಿಹೋದ (1762). ಅದೇ ವರ್ಷ ಅಮೆರಿಕಕ್ಕೆ ಹೋಗಿ ಫ್ರೆಂಚ್ ವಲಸೆಗಾರರಿಗೆ ಇಂಗ್ಲಿಷ್ ಕಲಿಸುತ್ತ ಫಿಲಡೆಲ್ಫಿಯದಲ್ಲಿ ಜೀವನ ಸಾಗಿಸುತ್ತಿದ್ದ.        (ಎಚ್.ಆರ್.ಡಿ.)

 ಅದುವರೆಗೊ ಕಾಬಟ್ ಏನ್ನೂ ಬರೆದಿರಲಿಲ್ಲ. 1794ರಲ್ಲಿ ಆ ಅವಕಾಶ ಒದಗಿ ಬಂತು. ಕ್ರೈಸ್ತರ ತ್ರಿಮೂರ್ತಿ ತತ್ತ್ವದ ನಂಬಿಕೆಯನ್ನು ವಿರೋಧಿಸಿ, ಏಕಮೂರ್ತಿತ್ತ್ವವುಳ್ಳ ದೈವತತ್ತ್ವದ ಪ್ರತಿಪಾದನೆ ಮಾಡುತ್ತಿದ್ದ ಜೋಸೆಫ್ ಪ್ರೀಸ್ಟ್ಲಿ ಆ ವರ್ಷ ಅಮೆರಿಕಕ್ಕೆ ಬಂದು ನೆಲಸಿದ. ಅವನ ಗೌರವಾರ್ಥ ಅನೇಕ ಸ್ವಾಗತ ಸಮಾರಂಭಗಳು ಜರುಗಿದುವು. ಜಗಳಗಂಟಿ ಕಾಬಟ್ ಒಡನೆಯೇ ಕೆರಳಿದ. ಪತ್ರಗಳನ್ನು ಬರೆದು ತನ್ನ ಪ್ರತಿಕ್ರಿಯೆಗಳನ್ನು ಪ್ರಕಟಿಸಿದ. 1800ರಲ್ಲಿ ಲಂಡನಿಗೆ ಹಿಂದಿರುಗುವವರೆಗೂ ಕಾಬಟ್ ಫ್ರೆಂಚ್ ಕ್ರಾಂತಿಯನ್ನೂ ಅದಕ್ಕೆ ಸಹಾಯ ಮಾಡಿದ ಅಮೆರಿಕನರನ್ನೂ ಟೀಕಿಸಿ ಬರೆಯುತ್ತಿದ್ದ. ಅತ್ಯಂತ ಶಕ್ತವಾದ ನಿಂದಾತ್ಮಕ ಶೈಲಿಯಲ್ಲಿ ಬರೆದ ಆ ಕೈಹೊತ್ತಗೆಗಳು ಕಾಬಟನ ಅನಂತರದ ಬರೆವಣಿಗೆಯ ಎಲ್ಲ ಲಕ್ಷಣಗಳನ್ನೂ ಒಳಗೊಂಡಿದ್ದುವು.

 ಅಮೆರಿಕದ ನ್ಯಾಯವನ್ನೂ ಕಾಬಟ್ ಕೆಣಕಿದ. ಜಾರ್ಜ್ ವಾಷಿಂಗ್ಟ್‍ನನನ್ನು ಬೆಂಜಮಿನ್ ರಷ್ ಎಂಬ ವೈದ್ಯ ತನ್ನ ವಿಶಿಷ್ಟ ರಕ್ತಸ್ರಾವಣ ಚಿಕಿತ್ಸೆಯಿಂದ ಸಾಯಿಸಿದನೆಂದು ಆಪಾದಿಸಿ ಬರೆದ. ಇದರಿಂದಾಗಿ ಅವನು ಮಾನನಷ್ಟ ಮೊಕದ್ದಮೆಯನ್ನೆದುರಿಸಿ ಬಲು ಭಾರಿ ದಂಡ ತೆರಬೇಕಾಯಿತು. ಅವನ ವಿಚಾರಣೆ ನಡೆಸಿ ದಂಡ ವಿಧಿಸಿದ ನ್ಯಾಯಾಧೀಶ ಆ ವೈದ್ಯನ ಮಿತ್ರ. ಕಾಬಟ್ ಅವನನ್ನೂ ಬಿಡಲಿಲ್ಲ. ಕಾಬಟನ ಈ ನಿರ್ಭೀತ ಬರೆವಣಿಗೆಗಳಿಂದಾಗಿ ಅಮೆರಿಕದಲ್ಲಿ ಅವನು ಇದುವುದೇ ಅಸಹನೀಯವೆನಿಸಿತು. 1800ರಲ್ಲಿ ಅಲ್ಲಿನ ಹೋರಾಟವನ್ನು ಕೊನೆಗೊಳಿಸಿ ಕಾಬಟ್ ಇಂಗ್ಲೆಂಡಿಗೆ ಮರಳಿದ. ಅಮೆರಿಕದಲ್ಲಿದ್ದಾಗ ಇವನು ಬರೆದು ಪ್ರಕಟಿಸುತ್ತಿದ್ದ ಲೇಖನಗಳು ಇಂಗ್ಲೆಂಡಿನಲ್ಲಿ ಮರು ಪ್ರಕಟನೆಯಾಗುತ್ತಿದ್ದುದರಿಂದ ಅಲ್ಲೂ ಇವನಾಗಲೇ ಪ್ರಸಿದ್ಧನಾಗಿದ್ದ . ಕಾಬಟನಿಗೆ ಇಂಗ್ಲೆಂಡಿನಲ್ಲಿ ಭವ್ಯ ಸ್ವಾಗತವೇ ಕಾದಿತ್ತು. ಉಗ್ರರಾಷ್ಟ್ರಾಭಿಮಾನ ಪತ್ರಿಕೋದ್ಯಮದ ಕ್ಷೇತ್ರದಲ್ಲಿ ಕಾಬಟ್ ಕಾಲಿಟ್ಟ. ಭೋಜನಕೂಟವೊಂದರಲ್ಲಿ ಇವನಿಗೆ ಪಿಟ್ಟನ ಭೇಟಿಯಾಯಿತು. ಸರ್ಕಾರದ ಪ್ರಮುಖ ಪತ್ರಿಕೆಯೊಂದರ ಒಡೆತನ ಮತ್ತು ಸಂಪಾದಕತ್ವವನ್ನು ಕಾಬಟನಿಗೆ ವಹಿಸಿಕೊಡುವುದಾಗಿ ಪಿಟ್ ಹೇಳಿದ. ಆದರೆ ಕಾಬಟ್ ಅದನ್ನು ನಿರಾಕರಿಸಿದ. ಅಮೆರಿಕದಲ್ಲೂ ಈತ ತನ್ನ ಸೇವೆಗಾಗಿ ಸರ್ಕಾರದಿಂದ ಪ್ರತಿಫಲ ಸ್ವೀಕರಿಸಲು ನಿರಾಕರಿಸಿದ್ದ. ಪಾಕ್ರ್ಯುಪೈನ್ ಎಂಬ ಪತ್ರಿಕೆಯೊಂದನ್ನು ಸ್ವತಃ ಸ್ಥಾಪಿಸಲು ಯತ್ನ ನಡೆಸಿದ. ಆದರೆ ಇದು ವಿಫಲವಾಯಿತು. ಅನಂತರ ವಿಲಿಯಂ ವಿಂಡ್‍ಹ್ಯಾಮನ ನೆರೆವಿನಿಂದ ಪೊಲಿಟಿಕಲ್ ರಿಜಿಸ್ಟರ್ ಎಂಬ ಸಾಪ್ತಾಹಿಕವೊಂದನ್ನು ಪ್ರಾರಂಭಿಸಿದ. ಅನಂತರ ಅನೇಕ ವರ್ಷಗಳ ಕಾಲ ವಿಂಡ್ ಹ್ಯಾಮನಿಂದ ಅವನಿಗೆ ರಾಜಕೀಯ ಬೆಂಬಲ ದೊರಕುತ್ತಿತ್ತು.

 ಜೇಕೊಬಿನ್ ಅಧಿಕಾರದ ಕಾಲದಲ್ಲಿ ಫ್ರಂಚರೊಮದಿಗೆ ಬ್ರಿಟನ್ನು ಮಾಡಿಕೊಂಡು ಶಾಂತಿಯನ್ನು ಕಾಬಟನ ಪತ್ರಿಕೆ ವಿರೋಧಿಸಿತು. ಮತ್ತೆ ಫ್ರಾನ್ಸಿನ ವಿರುದ್ಧ ಯುದ್ದ ಹೂಡಬೇಕೆಂಬುದು ಕಾಬಟನ ವಾದ. ಆದರೆ ಪಿಟ್ ಇನ್ನೊಮ್ಮೆ ಅಧಿಕಾರಕ್ಕೆ ಬಂದು ಮತ್ತೆ ಯುದ್ಧವನ್ನಾರಂಭಿಸಿದಾಗ ಕಾಬಟ್ ಕ್ರಮೇಣ ಯುದ್ಧ ವಿರೋಧಿಯಾಗಿ ಪರಿಣಮಿಸಿದ. ಯುದ್ಧವನ್ನು ವಿರೋಧಿಸುತ್ತಿದ್ದ ವಿಂಡ್‍ಹ್ಯಾಂ ಮತ್ತು ಫಾಕ್ಸರ ಪಕ್ಷವೇ ಅವನದೂ ಆಗಿತ್ತು. 1806ರಲ್ಲಿ ಸಕಲ ಪ್ರತಿಭೆಯ ಸಂಪುಟ ಏರ್ಷಟ್ಟಾಗ ಕಾಬಟನ ಮಿತ್ರರೂ ಸಚಿವರಾದರು. ಆದರೆ ಕಾಬಟ್ ಉತ್ತರೋತ್ತರದಲ್ಲಿ ಅವರಿಗೂ ವಿರೋಧಿಯಾದ. ಯುದ್ಧದ ಮುಂದುವರಿಕೆ, ವಿಶ್ರಾಂತಿ ವೇತನದ ಬೆಳೆವಣಿಗೆ, ರಾಷ್ಟ್ರಋಣದ ಮೊತ್ತದ ಏರಿಕೆ-ಇಂಥ ಅಪಾಯಕಾರಿ ಪ್ರವೃತ್ತಿಗಳನ್ನೆಲ್ಲ ಕಾಬಟ್ ಕಟುವಾಗಿ ಟೀಕಿಸಿದ. 1807ರಲ್ಲಿ ಆ ಸಂಪುಟ ಮುರಿದು ಬಿತ್ತು. ಆ ವೇಳೆಗೆ ಕಾಬಟನಲ್ಲೂ ಅಗಾಧ ಪರಿರ್ವತನೆಯಾಗಿತ್ತು. ಈತ ಕ್ರಾಂತಿವಾದಿಯಾಗಿದ್ದ. ಇಂಗ್ಲೆಂಡಿನಲ್ಲಿ ಪ್ರಬಲವಾಗಿದ್ದ ವ್ಹಿಗ್ ಮತ್ತು ಟೋರಿ ಪಕ್ಷಗಳೆರಡಕ್ಕೂ ಈತ ಕಡು ವಿರೋಧಿಯಾದ. ಶಾಂತಿ, ಸಂಸದೀಯ ಸುಧಾರಣೆ, ಆರ್ಥಿಕ ಸುಧಾರಣೆ-ಇವು ಆಗ ಕಾಬಟನ ಆದರ್ಶಗಳು.

 1805ರಿಂದ ಕಾಬಟನ ನಿಲವಿನಲ್ಲಿ ಅಗಾಧ ಬದಲಾವಣೆಗಳು ಆದುವು. ಈತ ಸೌಂತಾಪ್ಟನಿನ ಬಳಿ ಒಂದು ಜಮೀನು ಕೊಂಡು ಕೃಷಿಯಲ್ಲಿ ನಿರತನಾದ. ಬಾಲ್ಯಕಾಲದಲ್ಲಿದ್ದದ್ದಕ್ಕೂ ಆಗ್ಗೂ ಗ್ರಾಮಜೀವನದಲ್ಲಿ ಅಗಾಧ ಬದಲಾವಣೆಗಳಾಗಿದ್ದವು. ಕಾರ್ಮಿಕವರ್ಗದ ಹೀನಸ್ಥಿತಿಯನ್ನು ಕಂಡಾಗ ಇವನ ಕಣ್ಣು ತೆರೆಯಿತು. ಕೆರಳಿದ. ಸಂಪೂರ್ಣವಾಗಿ ತೀವ್ರಗಾಮಿಯಾದ. 1809ರಲ್ಲಿ ಎಲಿ ಎಂಬಲ್ಲಿಯ ಸೈನಿಕರು ತಮ್ಮ ಸಂಬಳದಿಂದ ಹಣವನ್ನು ಕಡಿಯುವುದನ್ನು ವಿರೋಧಿಸಿ ಬಂಡಾಯವೆದ್ದಾಗ ಸರ್ಕಾರ ಅದನ್ನು ಕ್ರೂರ ವಿಧಾನಗಳಿಂದ ಅಡಗಿಸಿತು. ಬಂಡಾಯದ ನಾಯಕರಿಗೆ ಛಡಿ ಏಟಿನ ಶಿಕ್ಷೆ ವಿಧಿಸಲಾಯಿತು. ಇದನ್ನು ವಿರೋಧಿಸಿ ಕಾಬಟ್ ಲೇಖನ ಬರೆದ. ರಾಜದ್ರೋಹದ ಆಪಾದನೆಗೆ ಗುರಿಯಾಗಿ, ಒಂದು ಸಾವಿರ ಜುಲ್ಮಾನೆಯನ್ನೂ ಒಂದೊಂದು ಸಾವಿರ ಪೌಂಡ್‍ಗಳ ಎರಡು ಮುಚ್ಚಳಿಕೆಗಳನ್ನೂ ನೀಡುವುದರ ಜೊತೆಗೆ, 2 ವರ್ಷಗಳ ಕಾರಾಗೃಹ ಶಿಕ್ಷೆಯನ್ನೂ ಅನುಭವಿಸಬೇಕಾಯಿತು. ಜೈಲಿನಿಂದಲೇ ಈತ ರಿಜಿಸ್ಟರ್ ಪತ್ರಿಕೆಯ ಸಂಪಾದನ ಕಾರ್ಯ ನಡೆಸುತ್ತಿದ್ದ. ಬಂಧನದಿಂದ ಹಣಕಾಸಿನ ಮುಗ್ಗಟ್ಟು ಉಂಟಾದಾಗ ಈತ ಎಲ್ಲ ಆಸ್ತಿಗಳನ್ನೂ ಮಾರಿ ರಿಜಿಸ್ಟರ್ ಪತ್ರಿಕೆಯನ್ನು ಮಾತ್ರ ಉಳಿಸಿಕೊಂಡ. ಈ ಅವಧಿಯಲ್ಲೇ ಕಾಬಟ್ ಪ್ರಸಿದ್ಧವಾದ ಪೇಪರ ಅಗೇನ್ಸ್ಟ್ ಗೋಲ್ಡ್ ಪ್ರಬಂದವನ್ನು ಬರೆದು, ಆಗಿನ ಆರ್ಥಿಕ ಸ್ಥಿತಿಯನ್ನೂ ನೋಟಿನ ಅತಿ ಪ್ರಸಾರಣವನ್ನೂ ಟೀಕಿಸಿ ಇದಕ್ಕೆಲ್ಲ ಪಿಟ್ ಮತ್ತು ಆತನ ಅನಂತರ ಬಂದವರ ಆರ್ಥಿಕ ನೀತಿಯೇ ಕಾರಣವೆಂದು ಆಪಾದಿಸಿದ.

 ಕಾಬಟ್ ಕಾರಾಗೃಹದಿಂದ ಹೊರಬಂದಾಗ ಅವನಿಗೆ ಉಳಿದಿದ್ದದ್ದು ಅವನ ಪತ್ರಿಕೆ ಒಂದೇ. 1815ರಲ್ಲಿ ಯುದ್ಧ ಮುಗಿದಿತ್ತು. ಬೆಲೆಗಳು ಇಳಿದಿದ್ದರೂ ಎಲ್ಲೆಲ್ಲೂ ನಿರುದ್ಯೋಗವೂ ಕಾರ್ಮಿಕ ಮತ್ತು ರೈತವರ್ಗಗಳಲ್ಲಿ ಅಸಮಾಧಾನವೂ ಹಬ್ಬಿದ್ದವು. ತೆರಿಗೆಯೊಂದು ಹೊರೆಯಾಗಿತ್ತು. ಸರ್ಕಾರ ಇದಾವುದನ್ನು ಲೆಕ್ಕಿಸದೆ ಕುಳಿತಿತ್ತು. ಪಾರ್ಲಿಮೆಂಟನ್ನು ಸುಧಾರಿಸಬೇಕೆಂದೂ ರಾಷ್ಟ್ರದ ಸಾಲದ ಮೇಲಿನ ಬಡ್ಡಿಯನ್ನು ಇಳಿಸಬೇಕೆಂದೂ ಕಾಬಟ್ ಮತ್ತು ಅವನ ಅನುಯಾಯಿಗಳು ಚಳವಳಿ ಹೂಡಿದರು. ರಾಷ್ಟ್ರದ ಗಮನ ಸೆಳೆದ ಕಾಬಟ್ ಕೇಂದ್ರ ವ್ಯಕ್ತಿಯಾದ. ಕಾರ್ಮಿಕ ಮುಖಂಡರಲ್ಲಿ ಅತಿ ಪ್ರಭಾವಿತ ವ್ಯಕ್ತಿಯೆನಿಸಿಕೊಂಡ. ಸರ್ಕಾರ ಚಳುವಳಿಯನ್ನು ದಮನ ಮಾಡಲು ಯತ್ನಿಸಿತು. ಕಾಬಟ್ ಸೆರೆವಾಸವನ್ನು ತಪ್ಪಿಸಿಕೊಳ್ಳಲು 1817ರಲ್ಲಿ ಓಡಿಹೋದ.

 ಕಾಬಟ್ ಅಮೆರಿಕದ ಲಾಂಗ್ ಐಲೆಂಡಿನ ನಾರ್ತ್‍ಹೆಂಪ್‍ಸ್ಟೆಡಿನಲ್ಲಿ ನೆಲೆಸಿ ಇಂಗ್ಲೆಂಡಿನಲ್ಲಿ ಪ್ರಕಟವಾಗುತ್ತಿದ್ದ ತನ್ನ ಪೊಲಿಟಿಕಲ್ ರಿಜಿಸ್ಟರ್ ವಾರಪತ್ರಿಕೆಗೆ ಬರೆಯುತ್ತಿದ್ದ. ಅಲ್ಲಿಯವರೆಗೂ ಪತ್ರಿಕೋದ್ಯಮಿಯಾಗಿ ಹೆಸರು ಗಳಿಸಿದ್ದ ಕಾಬಟ್ 1817-1819ರ ಕಾಲದಲ್ಲಿ ಜರ್ನಲ್ ಆಫ್ ಎ ಇಯರ್ಸ್ ರೆಸಿಡೆನ್ಸ್ ಇನ್ ದಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ, ಮತ್ತು ಗ್ರಾಮರ್ ಆಫ್ ದಿ ಇಂಗ್ಲಿಷ್ ಲಾಂಗ್ವೇಜ್ ಎಂಬ ಕೃತಿಗಳನ್ನು ರಚಿಸಿದ. ಇವುಗಳಿಂದ ಸಾಹಿತ್ಯದಲ್ಲಿ ಇವನಿಗೊಂದು ಸ್ಥಾನ ದೊರಕುವಂತಾಯಿತು.

 1819ರಲ್ಲಿ ಕಾಬಟ್ ಮತ್ತೆ ಇಂಗ್ಲೆಂಡಿಗೆ ಹಿಂದಿರುಗಿ ಕಾರ್ಮಿಕ ಚಳವಳಿಯ ಮುಖಂಡನಾದ. 1820ರಿಂದ 1830ರ ವರೆಗೆ ಇವನ ಬರೆಹಗಳು ಪತ್ರಿಕೆಯಲ್ಲಿ ಪ್ರಕಟವಾಗಿ ಪುಸ್ತಕರೂಪದಲ್ಲಿ ಬಂದುವು.

 ಕಾಬಟನ ಅತ್ಯುತ್ತಮ ಕೃತಿ ರೂರಲ್ ರೈಡ್ಸ್. ಇದರಲ್ಲಿ ಈತ ಅಂದಿನ ಜನಜೀವನವನ್ನು ಚೆನ್ನಾಗಿ ಚಿತ್ರಿಸಿದ್ದಾನೆ. ಮಿಲಿಟರಿ ಕಂಟ್ರಾಕ್ಟರುಗಳ ಏಳಿಗೆ, ಕೆಟ್ಟ ಮತ್ತು ಉತ್ತಮ ವ್ಯವಸಾಯ, ಬ್ಯಾಂಕರುಗಳು, ಹಳ್ಳಿಗಳ ಅವನತಿ, ಸಾಮಾನ್ಯ ಜನರ ಕಷ್ಟನಷ್ಟಗಳು-ಇವು ರೂರಲ್ ರೈಡ್ಸನ ವಸ್ತು. ಅನಂತರ 1822ರಲ್ಲಿ ಸೆರ್ಮನ್ಸ್, 1824-27ರಲ್ಲಿ ದಿ ಹಿಸ್ಟರಿ ಆಫ್ ದಿ ಪ್ರಾಟೆಸ್ಟಂಟ್ ರಿಫರ್ಮೇಷನ್ ಇನ್ ಇಂಗ್ಲೆಂಡ್ ಅಂಡ್ ಐರ್ಲೆಂಡ್, 1825ರಲ್ಲಿ ದಿ ವೂಡ್ ಲ್ಯಾಂಡ್ಸ್, 1829ರಲ್ಲಿ ಅಡ್ವೈಸ್ ಟು ಯಂಗ್ ಮೆನ್ ಮತ್ತು ದಿ ಇಂಗ್ಲಿಷ್ ಗಾರ್ಡನರ್ ಪ್ರಕಟವಾದುವು. 1820-21ರಲ್ಲಿ ದೊರೆಯ ವಿರುದ್ಧವಾಗಿ ಕೆರೊಲೀನ್ ರಾಣಿಯ ಪಕ್ಷ ವಹಿಸಿ ಲೇಖನಗಳನ್ನು ಬರೆದ. ಅವಳ ವಿವಾಹವಿಚ್ಛೇದನದ ಮೊಕದ್ದಮೆಯಲ್ಲಿ ಇವನೇ ಸಲಹೆಗಾರನಾಗಿದ್ದ. ರಾಣಿಗೆ ನ್ಯಾಯ ಸಲ್ಲಬೇಕೆಂಬ ವಾದದ ನಿಮಿತ್ತ ಈತ ಸುಧಾರಣಾವಾದಿಗಳೆಲ್ಲರ ಕೇಂದ್ರಶಕ್ತಿಯಾಗಿ ಪರಿಣಮಿಸಿದ.

 1830ರಲ್ಲಿ ವೆಲಿಂಗ್‍ಟನ್ ಅಧಿಕಾರ ಕಳೆದುಕೊಂಡಾಗ ಟೋರಿಗಳ ದೀರ್ಘ ಪ್ರಭಾವ ಇಳಿಮುಖವಾಯಿತು. ವಿಗ್ಗ್ ಮುಖಂಡ ಲಾರ್ಡ್ ಗ್ರೇ ಅಧೀಕಾರಕ್ಕೆ ಬಂದ. ಸುಧಾರಣೆಯ ಚಳವಳಿ ಅತಿಯಾಗಿ ಸರ್ಕಾರ ಅದನ್ನು ಹತ್ತಿಕ್ಕಿತು. ಕಾಬಟನನ್ನು ವಿಚಾರಣೆಗೆ ಗುರಿಪಡಿಸಲಾಯಿತು. ಕಾಬಟ್ ತನ್ನ ಪರವಾಗಿ ತಾನೇ ಅಮೋಘವಾಗಿ ವಾದಿಸಿ ಗೆದ್ದ. 1832ರಲ್ಲಿ ಸುಧಾರಣೆಯ ಕಾನೂನು ಬಂತು. ಓಲ್ಡ್‍ಹ್ಯಾಂನಿಂದ ಕಾಬಟ್ ಪಾರ್ಲಿಮೆಂಟಿಗೆ ಚುನಾಯಿತನಾದ. ಆಗ ಅವನಿಗೆ 68 ವರ್ಷ ವಯಸ್ಸು. ಆ ಮೊದಲು 1820 ಮತ್ತು 1826ರಲ್ಲಿ ಚುನಾವಣೆಗೆ ನಿಂತು ಜಯಶೀಲನಾಗಿರಲಿಲ್ಲ. 2ಳಿ ವರ್ಷಗಳ ತನ್ನ ಪಾರ್ಲಿಮೆಂಟ್ ಸದಸ್ಯತನದಲ್ಲಿ ಯಾವೊಂದು ಪಕ್ಷವನ್ನೂ ಹಿಡಿಯದೆ, ತೀವ್ರವಾದಿಗಳ ಸಣ್ಣ ಗುಂಪಿನ ನಾಯಕನಾಗಿ ಮುಂದುವರೆದ. ಅವನ ಆರೋಗ್ಯ ಕೆಟ್ಟರೂ ದಿನಚರಿಯ ಕೆಲಸವನ್ನು ಆತ ಬಿಡಲಿಲ್ಲ. ಕೊನೆಗೆ 1835ರ ಜೂನ್ 18ರಂದು ಇನ್‍ಫ್ಲು ಯೆಂಜûಕ್ಕೆ ತುತ್ತಾಗಿ ಕೊನೆಯುಸಿರೆಳೆದ. ಕಾಬಟ್ ಪಾರ್ಲಿಮೆಂಟ್ ಸದಸ್ಯನಾಗಿ ಅಷ್ಟೇನೂ ಯಶಸ್ಸು ಗಳಿಸಲಿಲ್ಲವೆಂದು ಹೇಳಲಾಗಿದೆ. ಆದರೆ ಆತ್ಮಗೌರವಾನ್ವಿತ ಪತ್ರಿಕೋದ್ಯಮಿಯಾಗಿ, ಕಾರ್ಮಿಕ ಚಳವಳಿಯ ಮುಖಂಡನಾಗಿ, ಗ್ರಂಥಕರ್ತನಾಗಿ, ಒಳ್ಳೆಯ ಬೇಸಾಯಗಾರನಾಗಿ, ಮೇಲಾಗಿ ದೇಶಾಭಿಮಾನಿಯಾಗಿ, ಸಾಮಾನ್ಯ ಜನರ ಬಗ್ಗೆ ಮರುಗಿ ಅವರ ಏಳಿಗೆಗೆ ಕೆಲಸ ಮಾಡಿದ ವ್ಯಕ್ತಿ ಆತ. ಅವನ ಮರಣಾನಂತರ ಅವನ ಮಕ್ಕಳು ಪೊಲಿಟಿಕಲ್ ರಿಜಿಸ್ಟರ್ ಪತ್ರಿಕೆಯನ್ನು ನಡೆಸಿಕೊಂಡು ಬರಲು ಪ್ರಯತ್ನಿಸಿದರು. ಆದರೆ ಕಾಬಟನ ಪ್ರಭಾವಯುತ ಸಂಪಾದಕೀಯ ಲೇಖನವಿಲ್ಲದೆ ಪತ್ರಿಕೆ ಸಪ್ಪೆಯಾಗಿ ಕೆಲವು ತಿಂಗಳುಗಳಲ್ಲೇ ನಿಂತುಹೋಯಿತು.   

(ಬಿ.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ